Wednesday, July 26, 2023

ಕಣ್ಣಿನ ಚಿಕಿತ್ಸೆಯಲ್ಲಿ ಲೇಸರ್ ನ ಉಪಯೋಗ

ಕಣ್ಣಿನ ಚಿಕಿತ್ಸೆಯಲ್ಲಿ ಲೇಸರ್ ನ ಉಪಯೋಗ : 

ಕಣ್ಣಿನ ಚಿಕಿತ್ಸೆಯಲ್ಲಿ ಹಲವು ಬಗೆಯ ಲೇಸರ್ ಗಳು ಉಪಯೋಗವಾಗುತ್ತವೆ. LASER ಎಂದರೆ Light Amplification by Stimulated Emission of Radiation. ಅಂದರೆ ಭಾವಾರ್ಥ - ಪ್ರಚೋದಿತ ವಿಕಿರಣತೆಯ ಬಿಡುಗಡೆಯಿಂದ ಬೆಳಕಿನ ಹೆಚ್ಚಳ. ಸ್ಥೂಲವಾಗಿ ಹೇಳುವುದಾದರೆ ಅದು ಬಾರಿ ಪ್ರಮಾಣದ ಶಕ್ತಿಯನ್ನು ಒಳಗೊಂಡ ಬೆಳಕಿನ ಮೂಲ (ಆಕರ ). ಇದು ಕಣ್ಣಿನ ಚಿಕಿತ್ಸೆಯಲ್ಲಿ ಸುಮಾರು 50 ವರ್ಷಗಳಿಂದಲೂ ಹೆಚ್ಚು ಸಮಯದಿಂದ ಬಳಕೆಯಲ್ಲಿದೆ. ವೈದ್ಯಕೀಯವಾಗಿ ಮೊಟ್ಟ ಮೊದಲ ಲೇಸರ್ ಉಪಯೋಗವಾಗಿದ್ದು ಕಣ್ಣಿನ ಅಕ್ಷಿಪಟಲದ ಕಾಯಿಲೆಗಳ ಚಿಕಿತ್ಸೆಯಲ್ಲಿ. ಆದರೆ ಈಗ ಪ್ರಸ್ತುತ ಹಲವು ವಿಧದ ಲೇಸರ್ ಗಳು ಕಣ್ಣಿನ ಬೇರೆ ಬೇರೆ ರೀತಿಯ ಚಿಕಿತ್ಸೆಯಲ್ಲಿ ಉಪಯೋಗವಾಗುತ್ತಿವೆ. 

ಬಹಳ ಹಿಂದಿನಿಂದಲೂ ಪ್ರಭಲವಾದ ಬೆಳಕಿನ ಕಿರಣಗಳು ಕಣ್ಣನ್ನು ಹಾನಿಗೊಳಿಸುತ್ತವೆ ಎಂಬ ಅಂಶ ತಿಳಿದಿತ್ತು. ಹಾಗಾಗಿಯೇ ಸೊಕ್ರೇಟ್ಸ್  ನಂತಹ ವಿಜ್ಞಾನಿ ನೇರವಾಗಿ ಬರೀ ಕಣ್ಣಿನಿಂದ ಸೂರ್ಯ ಗ್ರಹಣವನ್ನು ನೋಡಬಾರದು ಎಂದು ತಿಳಿಸಿದ್ದ. ಮೆಯರ್ - ಶ್ವಿಕೆರಾಥ್ ಎನ್ನುವವರು ಬೆಳಕನ್ನು ಮೊಟ್ಟ ಮೊದಲು ಕಣ್ಣಿನ ಚಿಕಿತ್ಸೆಗೆ ಬಳಸಿದರು. ಕಣ್ಣಿನ ಅಕ್ಷಿಪಟಲದಲ್ಲಿನ ಮೇಲನೋಮ ಚಿಕಿತ್ಸೆಗೆ ಇವರು ಅಕ್ಷಿಪಟಲದ ಮೇಲೆ ಬೆಳಕನ್ನು ಕ್ರೋಢೀಕರಿಸಿದರು. 1940 ರ ದಶಕದಲ್ಲಿ ಮಾರನ್  ಸಲಾಸ್ ಎನ್ನುವವರು ಕಣ್ಣಿನ ಅಕ್ಷಿಪಟಲದಲ್ಲಿ ಫೋಟೋಕೊಯಾಗುಲೇಶನ್ ಚಿಕಿತ್ಸೆಯನ್ನು ಕೈಗೊಂಡರು. ಆದರೆ ಈ ತರಹದ ಚಿಕಿತ್ಸೆಗೆ ಸೂರ್ಯನ ಬೆಳಕನ್ನು ಉಪಯೋಗಿಸಲು ಇರುವ ಮಿತಿಗಳನ್ನು ಇವರೆಲ್ಲಾ ಗಮನಿಸಿದರು. ಇದರಿಂದ ಸೂರ್ಯನ ಬೆಳಕು ಅಲ್ಲದ ಬೆಳಕುಗಳಾದ ಕಾರ್ಬನ್ ಆರ್ಕ್  ಕ್ಸಿನಾನ್ ಆರ್ಕ್ ಫೋಟೋಕೊಯಾಗುಲೇಶನ್ - ಇವು ಸ್ವಲ್ಪ
ಮಟ್ಟಿಗೆ ಪ್ರಚಲಿತಕ್ಕೆ ಬಂದವು. ಇವೆಲ್ಲವುಗಳ ಉಪಯೋಗದ ನಂತರ ಇವುಗಳಿಗಿಂತ ಲೇಸರ್ ಹೆಚ್ಚು ಉತ್ತಮ ಎಂಬ ಭಾವನೆ ಬಂದು ಅದು ಬೆಳವಣಿಗೆ ಹೊಂದುತ್ತಾ ಬಂದಿತು. ಇದು ಶಾಖದ ರೇಡಿಯೇಶನ್ ಮತ್ತು ಬೆಳಕಿನ ರೇಡಿಯೇಶನ್ ಗಿಂತ ಉತ್ತಮ ಎಂದು ತಿಳಿದುಬಂದಿತು. ಇದಕ್ಕೆ ಮುಖ್ಯ ಕಾರಣ ಲೇಸರ್ ನಲ್ಲಿಯ ಫೋಟಾನ್ ಗಳು ಕೋಹರೆಂಟ್ ಅಂದರೆ ಒಂದೇ ರೀತಿಯ ಫೇಸ್ ನಲ್ಲಿವೆ. ಹಾಗೆಯೇ ವೇವ್ ಲೆಂಗ್ತ್  ಬಹಳ ನ್ಯಾರೋ ರೇಂಜ್ ಹೊಂದಿದೆ. ಇದರಲ್ಲಿನ ಸ್ಪೇಶಿಯಲ್ ಮತ್ತು ಟೆಂಪೊರಲ್ ನ ಕೊಹರೆನ್ಸ್ ಗಳು ನಿರ್ದಿಷ್ಟ ಅಂಗಾಂಶಕ್ಕೇ ಗುರಿಯಾಗಿ ಚಿಕಿತ್ಸೆ ಮಾಡುವುದು ಸುಲಭ ಮಾಡುತ್ತದೆ. 

ಲೇಸರ್ ನಿಂದ ಉಂಟಾಗುವ ಅಂಗಾಂಶದ ಪ್ರತಿಕ್ರಿಯೆಗಳು : 
1. ಫೋಟೋಥರ್ಮಲ್ - ಇದರಲ್ಲಿ ಫೋಟೋಕೊಯಾಗುಲೇಶನ್ ಮತ್ತು ಫೋಟೋವೆಪರೈಸೇಶನ್ - ಹೀಗೆ 2 ರೀತಿಯಿವೆ. 
ಫೋಟೋಕೊಯಾಗುಲೇಶನ್ : ಇದರಲ್ಲಿ ಯಾವ ಅಂಗಾಂಶಕ್ಕೆ ಗುರಿ ಇಡಲಾಗುತ್ತದೆಯೋ ಆ ಅಂಗಾಂಶ ಲೇಸರ್ ಬೀಮ್ ಅನ್ನು ಹೀರುತ್ತದೆ. ಇದರ ಶಾಖದ ಪರಿಣಾಮವಾಗಿ ಹೆಚ್ಚು ಪ್ರೋಟೀನ್ ಗಳು ಡೀನೇಚರ್ ಗೊಳ್ಳುತ್ತವೆ. ಉದಾ : ಆರ್ಗಾನ್, ಕ್ರಿಪ್ಟಾನ್, ಡಯೋಡ್ ( 810 ) ಮತ್ತು ಫ್ರೀಕ್ವೆನ್ಸಿ ದುಪ್ಪಟ್ಟು ಮಾಡಿದ ಎನ್ ಡಿ ಯಾಗ್ ಲೇಸರ್. ಕಣ್ಣಿನ ಚಿಕಿತ್ಸೆಯಲ್ಲಿ ಹೆಚ್ಚಾಗಿ ಈ ಎಲ್ಲಾ ಲೇಸರ್ ಗಳು ಉಪಯೋಗವಾಗುತ್ತವೆ. 
ಫೋಟೋವೆಪರೈಸೇಶನ್ : ಇದರಲ್ಲಿ ಜೀವಕೋಶದ ಒಳಗಿನ ಮತ್ತು ಹೊರಗಿನ ನೀರಿನ ಅಂಶದ ವೆಪರೈಸೇಶನ್ ಆಗುತ್ತದೆ. ಇದು ಶಸ್ತ್ರಕ್ರಿಯೆಯಲ್ಲಿ ನಿರ್ದಿಷ್ಟವಾದ ಉಪಯೋಗವನ್ನು ಹೊಂದಿದೆ. ಏಕೆಂದರೆ ಚಿಕಿತ್ಸೆ ಮಾಡುವ ಸ್ಥಳದ  ಆಚೀಚಿನ ರಕ್ತನಾಳಗಳು ಸಹಿತ ಚಿಕಿತ್ಸೆಗೆ ಒಳಪಡುತ್ತವೆ. ‌ಧನಾತ್ಮಕ ಅಂಶ ಎಂದರೆ ರಕ್ತವು ಸೋರಿಕೆಯಾಗುವುದಿಲ್ಲ. ಉದಾ : ಇನ್ ಫ್ರಾರೆಡ್ ಒಳಗೊಂಡ ಕಾರ್ಬನ್ ಡೈಆಕ್ಸೈಡ್ ಲೇಸರ್.

ಫೋಟೋ ಕೆಮಿಕಲ್ ವಿಧಾನ : ಇದರಲ್ಲಿ ಎರಡು ವಿಧಗಳಿವೆ. ಫೋಟೋ ರೇಡಿಯೇಶನ್ ಮತ್ತು ಫೋಟೋ ಅಬ್ಲೇಶನ್ 
ಫೋಟೋ ರೇಡಿಯೇಶನ್ : ಇದರಲ್ಲಿ ಫೋಟೋ ಸೆನ್ಸಿಟೈಸಿಂಗ್ ವಸ್ತುವನ್ನು ರಕ್ತನಾಳಕ್ಕೆ ಇಂಜೆಕ್ಷನ್ ಮೂಲಕ ಚುಚ್ಚಲಾಗುತ್ತದೆ. ನಂತರ ನಿರ್ದಿಷ್ಟ ಅಂಗಾಶವನ್ನು ಲೇಸರ್ ಕಿರಣಕ್ಕೆ ಒಳಪಡಿಸಲಾಗುತ್ತದೆ.  ಇದರಿಂದ ಸೈಟೋಟಾಕ್ಸಿಕ್ ಫ್ರೀ  ರಾಡಿಕಲ್ಸ್  ಉತ್ಪನ್ನವಾಗುತ್ತವೆ. ಹಾಗಾಗಿ ಅಂತಿಮವಾಗಿ ಫೋಟೋ ಡೈನಾಮಿಕ್ ಥೆರಪಿಯ ಮೂಲಕ ಚಿಕಿತ್ಸೆ ಮಾಡಿದ ಹಾಗಾಗುತ್ತದೆ. 
ಫೋಟೋಅಬ್ಲೇಶನ್ - ಇಲ್ಲಿ ಬೆಳಕು ಅಲ್ಟ್ರಾವೈಯಲೆಟ್ ವೇವ್ ಲೆಂಗ್ತ್ ( < 350 n m ) ನಲ್ಲಿ ಉಪಯೋಗವಾಗುತ್ತದೆ. ಇದರ ಪರಿಣಾಮವಾಗಿ ಲಾಂಗ್ ಬೈಟ್ ಟಿಷ್ಯೂ ಪಾಲಿಮರ್ ಗಳು ಸಣ್ಣ ಸಣ್ಣ ತುಣುಕುಗಳಾಗಿ ಪರಿವರ್ತನೆ ಹೊಂದುತ್ತವೆ. ಉದಾ : ಎಕ್ಸೈಮರ್ ಲೇಸರ್.
ಫೋಟೋ ಡಿಸ್ ರಪ್ಶನ್ : ಇದರಲ್ಲಿ ಯಾವ ಅಂಗಾಂಶಕ್ಕೆ ಲೇಸರ್ ಕೊಡಲಾಗುತ್ತದೆಯೋ ಅದರಲ್ಲಿನ ಎಲೆಕ್ಟ್ರಾನ್ ಗಳು ಬೇರೆ ಬೇರೆಯಾಗುತ್ತವೆ. ಇದು ಒಂದು ರೀತಿಯ ಶಾಕ್ ವೇವ್ ಉಂಟು ಮಾಡುತ್ತದೆ. ಉದಾ : ಎನ್ ಡಿ ಯಾಗ್ ಲೇಸರ್ 

ಕಣ್ಣಿನ ಚಿಕಿತ್ಸೆಯಲ್ಲಿ ಲೇಸರ್ ಗಳು : 

ಕಣ್ಣಿನಲ್ಲಿ ಲೇಸರ್ ಗಳನ್ನು ಕಾಯಿಲೆ ಪತ್ತೆ ಹಚ್ಚಲು ಹಾಗೂ ಹಲವು ಕಣ್ಣಿನ ಕಾಯಿಲೆಗಳಿಗೆ ಚಿಕಿತ್ಸೆಯಾಗಿ - ಹೀಗೆ ಎರಡು ವಿಧದಲ್ಲಿ ಉಪಯೋಗಿಸುತ್ತೇವೆ. 
ಕಾಯಿಲೆ ಪತ್ತೆ ಹಚ್ಚಲು - ಕಣ್ಣಿನ ದೃಷ್ಟಿ ನರ ಆಪ್ಟಿಕ್ ನರದ ಎವಾಲ್ಯುಯೇಶನ್ ಗೆ ಕಾನ್ ಫೋಕಲ್ ಸ್ಕ್ಯಾನಿಂಗ್ ಲೇಸರ್ ಆಫ್ತಲ್ಮೋಸ್ಕೋಪ್ ಉಪಯೋಗಿಸಲಾಗುತ್ತದೆ. ಹಾಗೆಯೇ ಆಪ್ಟಿಕಲ್ ಕೊಹರೆನ್ಸ್ ಟೋಮೋಗ್ರಫಿ ( ಓ ಸಿ ಟಿ ) - ಇದು ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಾ ಹಾಗೂ ಅಕ್ಷಿಪಟಲದ ಹಲವು ಕಾಯಿಲೆಗಳನ್ನು ಪತ್ತೆ ಹಚ್ಚಲು ಉಪಯೋಗಿಸಲಾಗುತ್ತದೆ. 

ಚಿಕಿತ್ಸೆಯಲ್ಲಿ ಲೇಸರ್ ನ ಉಪಯೋಗ : 1. ಕಣ್ಣಿನ ದೃಷ್ಟಿ ದೋಷ ಇದ್ದಾಗ ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್ ಇಲ್ಲದೆ ದೃಷ್ಟಿ ಸರಿಯಾಗಿ ಕಾಣಲು ಉಪಯೋಗಿಸುವ ಲೇಸರ್ ಗಳು ಈ ವಿಧದ್ದು. ಉದಾ : ಲ್ಯಾಸಿಕ್, ಎಪಿಲ್ಯಾಸಿಕ್, ಲೇಸಕ್, ಪಿ ಆರ್ ಕೆ ಮತ್ತಿತರ ಚಿಕಿತ್ಸೆಗಳು 
2. ಗ್ಲೊಕೊಮಾ : ಇದರಲ್ಲಿ ಯಾಗ್ ಲೇಸರ್ ಉಪಯೋಗಿಸಿ ಲೇಸರ್ ಐರಿಡಾಟಮಿ, ಐರಿಡೊಪ್ಲಾಸ್ಟಿ, ಪ್ಯುಪಿಲೋಪ್ಲಾಸ್ಟಿ, ಟ್ರಬಕ್ಯುಲೋಪ್ಲಾಸ್ಟಿ - ಈ ತರಹದ ಚಿಕಿತ್ಸೆಗಳನ್ನು ಕೈಗೊಳ್ಳಲಾಗುತ್ತದೆ. 
3. ಕಣ್ಣಿನ ಪೊರೆ ಶಸ್ತ್ರಕ್ರಿಯೆಯಲ್ಲಿ ಫೆಮಟೋಸೆಕೆಂಡ್ ಲೇಸರ್ ಅನ್ನು ಉಪಯೋಗಿಸಲಾಗುತ್ತದೆ. ಸಹಜ ಶಸ್ತ್ರಕ್ರಿಯೆಯಿಂದ ಕಣ್ಣಿನ ಪೊರೆ ಶಸ್ತ್ರಕ್ರಿಯೆ ಕೈಗೊಂಡ ಎಷ್ಟೋ ತಿಂಗಳು, ವರ್ಷಗಳ ನಂತರ ಉಂಟಾಗಬಹುದಾದ ಸೆಕೆಂಡರಿ ಪೊರೆಯನ್ನು ಚಿಕಿತ್ಸೆ ಮಾಡಲು ಎನ್ ಡಿ ಯಾಗ್ ಲೇಸರ್ ಉಪಯೋಗಿಸಲಾಗುತ್ತದೆ. 
4. ಕಣ್ಣಿನ ಹಿಂಭಾಗದ ಕಾಯಿಲೆಗಳು : 
ಮುಖ್ಯವಾಗಿ ಡಯಾಬಿಟಿಸ್ ನಿಂದ ಕಣ್ಣಿನಲ್ಲಿ ಉಂಟಾಗುವ ರೆಟನೋಪತಿ ಚಿಕಿತ್ಸೆಯಲ್ಲಿ ಆರ್ಗಾನ್ ಲೇಸರ್ ಮತ್ತು ಡಯೋಡ್ ಲೇಸರ್ ಗಳನ್ನು ಉಪಯೋಗಿಸಲಾಗುತ್ತದೆ. ಈ ಚಿಕಿತ್ಸೆಯ ಮುಖ್ಯ ಉದ್ದೇಶ ಎಂದರೆ ಅಕ್ಷಿಪಟಲದ ರೆಟಿನೋಪತಿಗೆ ಒಳಗಾದ ಅಕ್ಷಿಪಟಲದಲ್ಲಿ ಕಾಯಿಲೆಯಿಂದ ಹಾಳಾದ ಅಕ್ಷಿಪಟಲವನ್ನು ಲೇಸರ್ ಹಾಯಿಸಿ ಸುಟ್ಟು ಆರೋಗ್ಯವಂತ ಅಕ್ಷಿಪಟಲಕ್ಕೆ ಹೆಚ್ಚಿನ ಆಮ್ಲಜನಕ ದೊರೆಯುವಂತೆ ಮಾಡುವುದು. ಹಾಗೆಯೇ ಹೊಸ ರಕ್ತನಾಳಗಳು ಹುಟ್ಟಿಕೊಳ್ಳಲು ಕಾರಣವಾಗುವ ಅಂಶಗಳನ್ನು ದೂರೀಕರಿಸುವುದು.‌ ಅಕ್ಷಿಪಟಲದ ಕಾಯಿಲೆಗಳಾದ ಅಕ್ಷಿಪಟಲದ ಅಭಿದಮನಿಯ ಮುಚ್ಚುವಿಕೆ, ಸಿಕಲ್ ಸೆಲ್ ರೆಟಿನೋಪತಿ - ಈ ರೀತಿಯ ಕಾಯಿಲೆಗಳಲ್ಲೂ ಉಪಯೋಗವಾಗುತ್ತದೆ. 
5. ಅಕ್ಷಿಪಟಲದ ಬ್ರೇಕ್ ಗಳು ಮತ್ತು ಅಕ್ಷಿಪಟಲದ ಸರಿದುಕೊಳ್ಳುವಿಕೆ ( Retinal detachment ) - ಈ ತರಹದ ಕಾಯಿಲೆಗಳಲ್ಲೂ ಈ ಆರ್ಗಾನ್, ಕ್ರಿಪ್ಟಾನ್ ಮತ್ತು ಡಯೋಡ್ ಲೇಸರ್ ಗಳು ಉಪಯೋಗವಾಗುತ್ತವೆ. 
6. ಕೊರಾಯಿಡ್ ಕಾಯಿಲೆಗಳಾದ ಕೊರಾಯಿಡ್ ನಿಯೋವ್ಯಾಸ್ಕುಲರೈಸೇಶನ್ ಗಳಲ್ಲೂ ಉಪಯೋಗವಾಗುತ್ತದೆ. 
7. ಕಣ್ಣಿನೊಳಗಿನ ಟ್ಯೂಮರ್ ಗಳ ಚಿಕಿತ್ಸೆಯಲ್ಲಿ : ರೆಟಿನೋಬ್ಲಾಸ್ಟೋಮಾ , ಮೆಲನೋಮ, ಆಂಜಿಯೋಮ‌ - ಇವುಗಳನ್ನು ಆರ್ಗಾನ್ ಮತ್ತು ಕ್ರಿಪ್ಟಾನ್ ಲೇಸರ್ ಗಳಿಂದ ಚಿಕಿತ್ಸೆ ಮಾಡಬಹುದು. 
8. ಮ್ಯಾಕ್ಯುಲಾರ್ ಎಡೀಮ : ಕಣ್ಣಿನ ಅಕ್ಷಿಪಟಲದ ಮಧ್ಯ ಭಾಗ ಮ್ಯಾಕ್ಯುಲದಲ್ಲಿ ಬೀಗಿನ ಅಂಶ ಕಂಡು ಬಂದಾಗ ಇದರಿಂದ ಚಿಕಿತ್ಸೆ ಮಾಡಬಹುದು.

ಲ್ಯಾಸಿಕ್ ಸರ್ಜರಿ ಅಥವಾ ಚಿಕಿತ್ಸೆಯ ಬಗ್ಗೆ ಸ್ವಲ್ಪ ಗಮನ ಹರಿಸೋಣ.
ಕನ್ನಡಕ ಅಥವಾ ಸ್ಫರ್ಷ ಮಸೂರ ಇಲ್ಲದೆ ಸ್ಪಷ್ಟವಾಗಿ ನೋಡಬೇಕೆಂಬ ದೃಷ್ಟಿ ದೋಷ ಇದ್ದವರ ಕನಸನ್ನು ನನಸಾಗಿಸಿದೆ ಈ ಚಿಕಿತ್ಸೆ. LASIK ಎಂದರೆ  Laser assisted in - situ keratomileusis ಅಂದರೆ ಒಂದು ರೀತಿಯ ಲೇಸರ್ ಉಪಯೋಗಿಸಿ ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯದ ಮೇಲೆ ಚಿಕಿತ್ಸೆ ಮಾಡಲಾಗುತ್ತದೆ. 

ಈ ಚಿಕಿತ್ಸೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ದೃಷ್ಟಿದೋಷದ ಬಗ್ಗೆ ಸ್ವಲ್ಪ ವಿವರವಾಗಿ ತಿಳಿದುಕೊಳ್ಳುವ ಅವಶ್ಯಕತೆ ಇದೆ.
ಕಣ್ಣು ಪೊಳ್ಳಾದ ಒಂದು ಚೆಂಡಿನಂತೆ ಎಂದು ತಿಳಿಯಿರಿ. ಅದರ ಒಳಭಾಗ ಬೆಳಕನ್ನು ಗ್ರಹಿಸುವ ಅಕ್ಷಿಪಟಲ. ಹೊರಗಡೆಯಿಂದ ಬರುವ ಬೆಳಕನ್ನು  ಕೇಂದ್ರೀಕರಿಸಲು  ಮುಂಭಾಗದಲ್ಲಿ ಕಪ್ಪಾಗಿ ಕಾಣಿಸುವ  ಪಾರದರ್ಶಕ ಪಟಲ ಕಾರ್ನಿಯ‌ ಹಾಗೂ ಒಳಭಾಗದಲ್ಲಿ ಪಾರದರ್ಶಕ ಮಸೂರವಿದೆ. ದೃಷ್ಟಿದೋಷವಿಲ್ಲದ ಕಣ್ಣಿನಲ್ಲಿ ಹೊರಗಿನ ಬೆಳಕು ಈ ಎರಡು ಪಾರದರ್ಶಕ ಮಾಧ್ಯಮಗಳನ್ನು ದಾಟಿ ಅಕ್ಷಿಪಟಲದ ಮೇಲೆ ಬಿಂಬ ಕೇಂದ್ರೀಕೃತಗೊಂಡು ಮೆದುಳಿನಲ್ಲಿ ನರ ಸಂವೇದನೆ ಉಂಟು ಮಾಡಿ ನಮಗೆ ವಸ್ತುವಿನ ಅಥವಾ ಆಕೃತಿಯ ಚಿತ್ರ  ಮೂಡುತ್ತದೆ. ಕಣ್ಣು ಗುಡ್ಡೆಯ ಉದ್ದದಲ್ಲಿ ಹುಟ್ಟುವಾಗಲೇ ಇರುವ ವ್ಯತ್ಯಾಸದಿಂದ ದೃಷ್ಟಿದೋಷ ಉಂಟಾಗುತ್ತದೆ. ಹಾಗಾಗಿ ಈ ಲ್ಯಾಸಿಕ್ ಚಿಕಿತ್ಸೆಯಲ್ಲಿ ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಾದ ಮೇಲೆ ಚಿಕಿತ್ಸೆ ಮಾಡಿ ಬೆಳಕು ಕೇಂದ್ರೀಕೃತಗೊಳ್ಳಲು ಇರುವ ಅಸಮತೋಲನವನ್ನು ನಿವಾರಿಸಲು ಯತ್ನಿಸಲಾಗುತ್ತದೆ. ಎಕ್ಸೈಮರ್ ಲೇಸರ್ ಎಂಬ ಲೇಸರ್ ಕಿರಣ ಉಪಯೋಗಿಸಿ ಮೊದಲೇ ಕರಾರುವಕ್ಕಾಗಿ ಲೆಕ್ಕಾಚಾರ ಹಾಕಿದಷ್ಟು ಲೇಸರ್ ಶಕ್ತಿಯನ್ನು ಕಾರ್ನಿಯಾದ ಮೇಲೆ ಹಾಯಿಸಿ ದೃಷ್ಟಿದೋಷ ಸರಿಪಡಿಸಲಾಗುತ್ತದೆ. 

ಲ್ಯಾಸಿಕ್ ಚಿಕಿತ್ಸೆಯನ್ನು ಎರಡು ಹಂತದಲ್ಲಿ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಕಣ್ಣಿನ ದೃಷ್ಟಿದೋಷವನ್ನು ಕರಾರುವಕ್ಕಾಗಿ ಲೆಕ್ಕ ಹಾಕುವುದು ಹಾಗೂ ಕಣ್ಣಿನಲ್ಲಿ ಇರಬಹುದಾದ  ಆಪ್ಟಿಕಲ್ ಅಬರೇಶನ್ ಅಂಶವನ್ನು ಅಳೆಯುವುದು. ಈ ಅಂಶ ವೇವ್ ಫ್ರಂಟ್ ಅಬರೋಮೆಟ್ರಿ ಎಂಬ ಹೊಸ ಸಾಧನದಿಂದ ಅಳೆಯಲ್ಪಡುತ್ತದೆ. ಹೀಗೆ ಲೆಕ್ಕ ಹಾಕಿ ಅಳೆದ ಅಂಶಗಳೆಲ್ಲ ವಿಶೇಷ ಕಂಪ್ಯೂಟರ್ ನಲ್ಲಿ ದಾಖಲಾಗುತ್ತದೆ. ಈ ಅಂಶಗಳು ಎಕ್ಸೈಮರ್ ಲೇಸರ್ ಯಂತ್ರಕ್ಕೆ ವರ್ಗಾವಣೆಯಾಗುತ್ತದೆ. ಎರಡನೆಯ ಹಂತದಲ್ಲಿ ಆಯಾಯ ದೃಷ್ಟಿದೋಷಕ್ಕನುಗುಣವಾಗಿ ಅಗತ್ಯವಿರುವ ಲೇಸರ್ ಕಿರಣವನ್ನು ಕಾರ್ನಿಯದ ಮೇಲೆ  ಹಾಯಿಸಲಾಗುತ್ತದೆ. ಈ ಚಿಕಿತ್ಸೆ ಕೆಲವೇ ಸೆಕೆಂಡುಗಳಲ್ಲಿ ಮುಗಿದುಹೋಗುತ್ತದೆ. ಯಾವ ರೀತಿಯ ನೋವು, ವೇದನೆ ಆಗುವುದಿಲ್ಲ. 
ಈ ಚಿಕಿತ್ಸೆಯಿಂದ ಸಾಮಾನ್ಯವಾಗಿ -- 6 
ರಿಂದ +14 ರವರೆಗಿನ ಹೆಚ್ಚಿನ ಎಲ್ಲಾ ರೀತಿಯ ದೃಷ್ಟಿದೋಷಗಳಿಗೂ ಚಿಕಿತ್ಸೆಯನ್ನು
ಯಶಸ್ವಿಯಾಗಿ ಕೈಗೊಳ್ಳಲಾಗುತ್ತದೆ. 18 ವರ್ಷ ದಾಟಿದ ದೃಷ್ಟಿ ದೋಷ ಬಹಳಷ್ಟು ದಿನಗಳಿಂದ ಒಂದೇ ರೀತಿಯಲ್ಲಿರುವ ಯಾರು ಬೇಕಾದರೂ ಈ ಚಿಕಿತ್ಸೆ ಮಾಡಿಸಿಕೊಳ್ಳಬಹುದು.

Dr. PADMAJEET A NADAGOUDA PATIL
MBBS DNB FRVS FRCS MNAMS 
VITREO RETINA SURGEON 
RABKAVI-BANAHATTI

No comments:

Post a Comment