ಅಗ್ನಿಶಾಮಕ ಠಾಣೆಯ ಗುದ್ದಲಿ ಪೂಜೆ ಮಾಡಿದ ಶಾಸಕ ಸಿದ್ದು ಸವದಿ
ಏಕ ಪಕ್ಷಿಯ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರಿoದ ಖಂಡನೆ |
ತೇರದಾಳ 26 :ಬರೀ ಹೋರಾಟದಿಂದಲೇ ಪ್ರತಿಯೊಂದನ್ನು ಪಡೆಯುವ ದೌರ್ಭಾಗ್ಯವುಳ್ಳ ತೇರದಾಳ ತಾಲೂಕಿಗೆ ಬಹುದಿನಗಳ ನಂತರ ಸರಕಾರದ ವರದಾನವಾಗಿ ಮಂಜೂರಾದ ಅಗ್ನಿ ಶಾಮಕ ಠಾಣೆಯ ಕಟ್ಟಡದ ಶಂಕು ಸ್ಥಾಪನೆ ಸದ್ದಿಲ್ಲದೇ ಏಕಪಕ್ಷೀಯವಾಗಿ ತರಾತುರಿಯಲ್ಲಿ ಕೈಗೊಂಡಿರುವುದು ಸಂಶಯಕ್ಕೆ ಕಾರಣವಾಗಿದ್ದು, ಪಕ್ಷಾತೀತವಾಗಿ ಹಬ್ಬದಂತೆ ನೆರವೇರಬೇಕಾದ ಈ ಕಾರ್ಯಕ್ರಮವು ರಾಜಕೀಯ ನಾಯಕರ ಹಗ್ಗಜಗ್ಗಾಟದಲ್ಲಿ ಸ್ಮಶಾನ ಸದೃಶ್ಯವಾಗಿದ್ದು, ಕನಿಷ್ಠ ಸೌಜನ್ಯಕ್ಕಾದರೂ ಸ್ಥಳೀಯ ಪುರ ಸಭೆ ಅಧ್ಯಕ್ಷರು ಹಾಗೂ ಇತರ ಯಾವುದೇ ಪದಾಧಿಕಾರಿಗಳಿಗೆ ಮಾಹಿತಿ ಇಲ್ಲದೇ ಕೇವಲ ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ಶಂಕು ಸ್ಥಾಪನೆ ನೆರವೇರಿಸಿರುವುದನ್ನ ಖಂಡಿಸುವುದಾಗಿ ತಾಲೂಕಾ ಪ-ಂಚ ಗ್ಯಾರಂಟಿ ಯೋಜನೆಯ ಅಧ್ಯಕ್ಷ ನೇಮಣ್ಣಾ ಸಾವಂತನವರ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಠಾಚಾರ ಅನುಪಾಲನೆ ಮುಖ್ಯವಾಗಿದ್ದು,ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಯಾವುದೇ ಕಾಮಗಾರಿಗೆ ಪಕ್ಷದ ಲೇಬಲ್ ಬದಲಾಗಿ ಸರ್ಕಾರದ ಲೇಬಲ್ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಕಾರ್ಯಕ್ರಮದ ಆಯೋಜಕರು ಸ್ಥಳೀಯ ಆಡಳಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮದ ರೂಪರೇಷೆಗಳನ್ನು ಸಿದ್ಧಪಡಿಸಿ ಸ್ಥಳೀಯ ಜನಪ್ರತಿನಿಧಿಗಳಿಗೆ ಪ್ರಾಧಾನ್ಯತೆ ನೀಡಬೇಕಾಗಿರುವುದು ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ಸ್ಥಳೀಯ ಪ್ರಾಧಿಕಾರದ ಗಮನಕ್ಕೆ ತಾರದೇ ಕೇವಲ ಶಾಸಕ ಸಿದ್ದು ಸವದಿ ಹಾಗೂ ಬಿಜೆಪಿ ಮುಖಂಡರು ಮಾತ್ರ ಸೇರಿಕೊಂಡು ಗುರುವಾರ ಪಟ್ಟಣದ ಹೊರವಲಯದಲ್ಲಿ ಅಂದಾಜು ೩ ಕೋಟಿ ಮೊತ್ತದ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಕಾಮಗಾರಿ ಗುದ್ದಲಿ ಪೂಜೆ ನೆರೆವೇರಿಸಿದ್ದು ಶಾಸಕರ ಪಕ್ಷಬೇಧ ನೀತಿ ಪ್ರಚುರಪಡಿಸುವಂತಿದ್ದು, ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬೇಕಾದ ಶಾಸಕರೇ ಮಲತಾಯಿ ಧೋರಣೆ ತಾಳಿರುವುದನ್ನು ಖಂಡಿಸುವುದಾಗಿ ತಿಳಿಸಿದರು.
ಮರು ಶಂಕು ಸ್ಥಾಪನೆಗೆ ಆಗ್ರಹ : ಸದರಿ ಕಾಮಗಾರಿಯನ್ನು ಮಾನ್ಯ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ ತಿಮ್ಮಾಪೂರ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ವಿಧಾನ ಪರಿಷತ್ ಸದಸ್ಯರು ಮತ್ತು ಸ್ಥಳೀಯ ತಹಶೀಲ್ದಾರ ಹಾಗೂ ಸರ್ವ ಪಕ್ಷಗಳ ಸ್ಥಾನಿಕ ಪ್ರತಿನಿಧಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಕೈಗೊಳ್ಳಲು ಆಗ್ರಹಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಾಗಲೋಟೆ ಜಿಲ್ಲಾ ಕಾಂಗ್ರೆಸ್ ಎಸ್.ಸಿ.ಘಟಕದ ಉಪಾಧ್ಯಕ್ಷ ಪಿ,ಎಸ್.ಮಾಸ್ತಿ, ದಯಾನಂದ ಕಾಳೆ, ಗೊಪಾಲ ಮಾಂಗ, ಮೈಬೂಬ ಜಮಾದಾರ ಮಾತನಾಡಿದರು. ರಾಜಾಸಾಬ ನಗಾರ್ಜಿ, ಸಂಜು ಹಾಡಕಾರ, ಮುನ್ನಾ ತಾಂಬೋಳಿ, ಸದಾಶಿವ ಶಿಂಗೆ, ಫಯಾಜ ಅತಾರಾವುತ, ಮಗೆಪ್ಪ ರೋಡಕರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
No comments:
Post a Comment