Monday, December 29, 2025

ಬುಲ್ಡೋಜರ್ ರಾಜಕಾರಣಕ್ಕೆ ಎಸ್ ಡಿ ಪಿ ಐ ತೀವ್ರ ಖಂಡನೆ :

ಬೆಂಗಳೂರಿನ ಫಕೀರ್ ಲೇಔಟ್ ನಿರಾಶ್ರಿತರ ಪರವಾಗಿ ತೇರದಾಳದಲ್ಲಿ SDPI ಬೃಹತ್ ಪ್ರತಿಭಟನೆ
ಬುಲ್ಡೋಜರ್ ರಾಜಕಾರಣಕ್ಕೆ ತೀವ್ರ ಖಂಡನೆ
ತೇರದಾಳ: ಬೆಂಗಳೂರಿನ ಫಕೀರ್ ಲೇಔಟ್‌ನಲ್ಲಿ ದಶಕಗಳಿಂದ ವಾಸವಿದ್ದ ಬಡವರ ಮನೆಗಳನ್ನು ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದೆ ಧ್ವಂಸಗೊಳಿಸಿ ಅವರನ್ನು ಬೀದಿಗೆ ತಳ್ಳುತ್ತಿರುವ ಸರ್ಕಾರದ ಅಮಾನವೀಯ **“ಬುಲ್ಡೋಜರ್ ರಾಜಕಾರಣ”**ವನ್ನು ಖಂಡಿಸಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತೇರದಾಳ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮಜದ್ ಖಾನ್ ಇನಾಮದಾರ ಅವರು, “ಬೆಂಗಳೂರಿನ ಫಕೀರ್ ಲೇಔಟ್‌ನಲ್ಲಿ ದಶಕಗಳಿಂದ ವಾಸಿಸುತ್ತಿರುವ ಬಡವರ ಹೊಟ್ಟೆಯ ಮೇಲೆ ಸರ್ಕಾರ ಹೊಡೆಯುತ್ತಿದೆ. ಯಾವುದೇ ಪುನರ್ವಸತಿ ವ್ಯವಸ್ಥೆ ಕಲ್ಪಿಸದೇ ಮನೆಗಳನ್ನು ನೆಲಸಮಗೊಳಿಸಿರುವುದು ಸಂವಿಧಾನ ವಿರೋಧಿ ನಡೆ. ನಿರಾಶ್ರಿತರಿಗೆ ತಕ್ಷಣ ಪುನರ್ವಸತಿ ಕಲ್ಪಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು,” ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಬಾರಕ್ ಅಲ್ಲಾ ಖಾನ್ ಮಾತನಾಡಿ, ಸರ್ಕಾರ ಕೇವಲ ಬಡವರನ್ನೇ ಗುರಿಯಾಗಿಸಿಕೊಂಡು ಬುಲ್ಡೋಜರ್ ಪ್ರಯೋಗ ಮಾಡುತ್ತಿದೆ. ಅಧಿಕಾರವು ಬಡವರಿಗೆ ಆಸರೆಯಾಗಲು ಇರಬೇಕೇ ಹೊರತು, ಅವರನ್ನು ಅನಾಥರನ್ನಾಗಿ ಮಾಡಲು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಹುಸೇನ್ ಜಮಾದರ, ನಿಸಾರ್ ಅಲಾಸ್, ತೇರದಾಳ ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಮೈನುದ್ದೀನ್ ಮೋಮಿನ್, ಜೊತೆ ಕಾರ್ಯದರ್ಶಿ ಆಸಿಫ್ ಸಂಗತ್ರಾಸ್, ಕೋಶಾಧಿಕಾರಿ ಅಕ್ರಮ್ ಜಮಾದರ್ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Saturday, December 27, 2025

ನಿಧನ ವಾರ್ತೆ : ಹಳಂಗಳಿ ಗ್ರಾಮದ ಮುಸ್ಲಿಂ ಧರ್ಮದ ಹಿರಿಯರಾದ ಚಾಂದಸಾಬ ಕ ಲಾಡಖಾನ ನಿಧನ.

ನಿಧನ ವಾರ್ತೆ
ಚಾಂದಸಾಬ ಕ ಲಾಡಖಾನ  
ತೇರದಾಳ : ಸಮೀಪದ ಹಳಿಂಗಳಿ ಗ್ರಾಮದ ಮುಸ್ಲಿಂ ಸಮುದಾಯದ ಧರ್ಮ ಗುರು ಚಾಂದಸಾಬ ಕಬೀರಸಾಬ ಲಾಡಖಾನ ನಿಧನರಾಗಿದ್ದು,ಮೃತರಿಗೆ ೪ ಜನ ಹೆಣ್ಣುಮಕ್ಕಳು ಹಾಗೂ ಒರ್ವ ಸುಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದು, ಇವರ ಅಕಾಲಿಕ ಮರಣಕ್ಕೆ ಹಳಿಂಗಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಕಂಬನಿ ಮಿಡಿದಿದ್ದು, ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊಂದಿಗೆ ಗೌರವಾರ್ಪನೆಯನ್ನು ಸಲ್ಲಿಸಲಾಯಿತು.

Friday, December 26, 2025

ಅಗ್ನಿಶಾಮಕ ಠಾಣೆಯ ಗುದ್ದಲಿ ಪೂಜೆ ಮಾಡಿದ ಶಾಸಕ ಸಿದ್ದು ಸವದಿ || ಏಕ ಪಕ್ಷಿಯ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರಿoದ ಖಂಡನೆ |


ಅಗ್ನಿಶಾಮಕ ಠಾಣೆಯ ಗುದ್ದಲಿ ಪೂಜೆ ಮಾಡಿದ ಶಾಸಕ ಸಿದ್ದು ಸವದಿ
ಏಕ ಪಕ್ಷಿಯ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರಿoದ ಖಂಡನೆ |

ತೇರದಾಳ 26  :ಬರೀ ಹೋರಾಟದಿಂದಲೇ ಪ್ರತಿಯೊಂದನ್ನು ಪಡೆಯುವ ದೌರ್ಭಾಗ್ಯವುಳ್ಳ ತೇರದಾಳ ತಾಲೂಕಿಗೆ ಬಹುದಿನಗಳ ನಂತರ ಸರಕಾರದ ವರದಾನವಾಗಿ ಮಂಜೂರಾದ ಅಗ್ನಿ ಶಾಮಕ ಠಾಣೆಯ ಕಟ್ಟಡದ ಶಂಕು ಸ್ಥಾಪನೆ ಸದ್ದಿಲ್ಲದೇ ಏಕಪಕ್ಷೀಯವಾಗಿ ತರಾತುರಿಯಲ್ಲಿ ಕೈಗೊಂಡಿರುವುದು ಸಂಶಯಕ್ಕೆ ಕಾರಣವಾಗಿದ್ದು, ಪಕ್ಷಾತೀತವಾಗಿ ಹಬ್ಬದಂತೆ ನೆರವೇರಬೇಕಾದ ಈ ಕಾರ್ಯಕ್ರಮವು ರಾಜಕೀಯ ನಾಯಕರ ಹಗ್ಗಜಗ್ಗಾಟದಲ್ಲಿ ಸ್ಮಶಾನ ಸದೃಶ್ಯವಾಗಿದ್ದು, ಕನಿಷ್ಠ ಸೌಜನ್ಯಕ್ಕಾದರೂ ಸ್ಥಳೀಯ ಪುರ ಸಭೆ ಅಧ್ಯಕ್ಷರು ಹಾಗೂ ಇತರ ಯಾವುದೇ ಪದಾಧಿಕಾರಿಗಳಿಗೆ ಮಾಹಿತಿ ಇಲ್ಲದೇ ಕೇವಲ ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ಶಂಕು ಸ್ಥಾಪನೆ ನೆರವೇರಿಸಿರುವುದನ್ನ ಖಂಡಿಸುವುದಾಗಿ ತಾಲೂಕಾ ಪ-ಂಚ ಗ್ಯಾರಂಟಿ ಯೋಜನೆಯ ಅಧ್ಯಕ್ಷ ನೇಮಣ್ಣಾ ಸಾವಂತನವರ ಆಕ್ರೋಶವನ್ನು ವ್ಯಕ್ತಪಡಿಸಿದರು.
            ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಠಾಚಾರ ಅನುಪಾಲನೆ ಮುಖ್ಯವಾಗಿದ್ದು,ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಯಾವುದೇ ಕಾಮಗಾರಿಗೆ ಪಕ್ಷದ ಲೇಬಲ್ ಬದಲಾಗಿ ಸರ್ಕಾರದ ಲೇಬಲ್ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಕಾರ್ಯಕ್ರಮದ ಆಯೋಜಕರು ಸ್ಥಳೀಯ ಆಡಳಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮದ ರೂಪರೇಷೆಗಳನ್ನು ಸಿದ್ಧಪಡಿಸಿ ಸ್ಥಳೀಯ ಜನಪ್ರತಿನಿಧಿಗಳಿಗೆ ಪ್ರಾಧಾನ್ಯತೆ ನೀಡಬೇಕಾಗಿರುವುದು ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ಸ್ಥಳೀಯ ಪ್ರಾಧಿಕಾರದ ಗಮನಕ್ಕೆ ತಾರದೇ ಕೇವಲ ಶಾಸಕ ಸಿದ್ದು ಸವದಿ ಹಾಗೂ ಬಿಜೆಪಿ ಮುಖಂಡರು ಮಾತ್ರ ಸೇರಿಕೊಂಡು ಗುರುವಾರ ಪಟ್ಟಣದ ಹೊರವಲಯದಲ್ಲಿ ಅಂದಾಜು ೩ ಕೋಟಿ ಮೊತ್ತದ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಕಾಮಗಾರಿ ಗುದ್ದಲಿ ಪೂಜೆ ನೆರೆವೇರಿಸಿದ್ದು ಶಾಸಕರ ಪಕ್ಷಬೇಧ ನೀತಿ ಪ್ರಚುರಪಡಿಸುವಂತಿದ್ದು, ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬೇಕಾದ ಶಾಸಕರೇ ಮಲತಾಯಿ ಧೋರಣೆ ತಾಳಿರುವುದನ್ನು ಖಂಡಿಸುವುದಾಗಿ ತಿಳಿಸಿದರು.
           
ಮರು ಶಂಕು ಸ್ಥಾಪನೆಗೆ ಆಗ್ರಹ : ಸದರಿ ಕಾಮಗಾರಿಯನ್ನು ಮಾನ್ಯ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ ತಿಮ್ಮಾಪೂರ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ವಿಧಾನ ಪರಿಷತ್ ಸದಸ್ಯರು ಮತ್ತು ಸ್ಥಳೀಯ ತಹಶೀಲ್ದಾರ ಹಾಗೂ ಸರ್ವ ಪಕ್ಷಗಳ ಸ್ಥಾನಿಕ ಪ್ರತಿನಿಧಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಕೈಗೊಳ್ಳಲು ಆಗ್ರಹಿಸುವುದಾಗಿ ತಿಳಿಸಿದರು.
             ಪತ್ರಿಕಾಗೋಷ್ಠಿಯಲ್ಲಿ ಬಾಗಲೋಟೆ ಜಿಲ್ಲಾ ಕಾಂಗ್ರೆಸ್ ಎಸ್.ಸಿ.ಘಟಕದ ಉಪಾಧ್ಯಕ್ಷ ಪಿ,ಎಸ್.ಮಾಸ್ತಿ, ದಯಾನಂದ ಕಾಳೆ, ಗೊಪಾಲ ಮಾಂಗ, ಮೈಬೂಬ ಜಮಾದಾರ ಮಾತನಾಡಿದರು. ರಾಜಾಸಾಬ ನಗಾರ್ಜಿ, ಸಂಜು ಹಾಡಕಾರ, ಮುನ್ನಾ ತಾಂಬೋಳಿ, ಸದಾಶಿವ ಶಿಂಗೆ, ಫಯಾಜ ಅತಾರಾವುತ, ಮಗೆಪ್ಪ ರೋಡಕರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.


 




Thursday, December 18, 2025

ಉಪವಾಸ ಸತ್ಯಾಗ್ರಹ ವೇದಿಕೆಗೆ ಬೆಂಬಲ ಸೂಚಿಸಿದ ರಬಕವಿ ಬನಹಟ್ಟಿ ನಗರದ ಆಟೋ ಚಾಲಕರು :

ಉಪವಾಸ ಸತ್ಯಾಗ್ರಹ ವೇದಿಕೆಗೆ ಬೆಂಬಲ ಸೂಚಿಸಿದ ಆಟೋ ಚಾಲಕರು :* . 


ರಬಕವಿ - ಬನಹಟ್ಟಿ :  ನಗರದಲ್ಲಿ ರಬಕವಿ - ಬನಹಟ್ಟಿ ಮಹೇಶವಾಡಗಿ ಸೇತುವೆಯ ತ್ವರಿತ ಪೂರ್ಣ ಕಾಮಗಾರಿಗೆ ಅಗ್ರಹಿಸಿ , ಕಳೆದ ಎರಡು ದಿನಗಳಿಂದ ಉಪವಾಸ ಸತ್ಯಾಗ್ರಹ  ನಡೆಯುತ್ತಾ ಇದೆ . ಈ ಸೇತುವೆಯು ಹಲವಾರು ವರ್ಷಗಳ ಹಿಂದೆಯೇ ಚಾಲನೆಗೊಂಡು ಬಳಿಕ ಸ್ಥಗಿತಗೊಂಡಿದ್ದನ್ನು ವಿರೋಧಿಸಿ , ಹಲವು ಬಾರಿ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗದೆ ಉಪವಾಸ ಸತ್ಯಾಗ್ರಹ ಒಂದೇ ದಾರಿ ಎಂದು ಭಾವಿಸಿ ಜನಸಾಮಾನ್ಯರು ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ . ನಗರದ ಶಂಕರಲಿಂಗ್ ದೇವಸ್ಥಾನದ ಹತ್ತಿರ ವೇದಿಕೆಯಲ್ಲಿ ಸತ್ಯಾಗ್ರಹ ನಿರತ ಡಾ. ರವಿ ಜಮಖಂಡಿ ಇವರ ಮುಖಂಡತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ವೇದಿಕೆಗೆ ಅವಳಿ ನಗರಗಳ ರಬಕವಿ  - ಬನಹಟ್ಟಿ ಆಟೋ ಚಾಲಕರ ಹಾಗೂ ಮಾಲಕರ ಸಂಘಟನೆಗಳ ಒಕ್ಕೂಟವು ಬೆಂಬಲವನ್ನು ಸೂಚಿಸಿದರು.
 ಈ ಸಂದರ್ಭದಲ್ಲಿ ಬನಹಟ್ಟಿ ಶ್ರೀ ಕಾಡಸಿದ್ದೇಶ್ವರ ಆಟೋ ಚಾಲಕರು ಹಾಗೂ ಮಾಲಕರ ಸಂಘದ ಅಧ್ಯಕ್ಷ ರಂಜಾನ್ ಗೋರಿ, ಉಪಾಧ್ಯಕ್ಷ ಸುಭಾಷ್ ಪಾರ್ಥನಹಳ್ಳಿ ಸಿದ್ದಲಿಂಗ್ ಪಾಟೀಲ್ , ಗನಶೇದ್ ಹನಗಂಡಿ,  ಮುಸ್ತಾಕ ಪೆಂಡಾರಿ ,  ಆಕ್ರಂ  ರಾಜನ್ನವರ್, ಸುನಿಲ್ ಗೊಂದ ಕರ್,  ಅನಿಲ ಗೊಂಡಕರ,    ರಬಕವಿ ನಗರದ ಆಟೋ ಚಾಲಕರ ಸಂಘಟನೆಯ ಸದಸ್ಯರಾದ ರಮೇಶ್ ಕಾಕಾ ಹೊಸಕೋಟಿ ಹಾಗೂ ಕರವೇ ಗಜ ಸೇನೆ ಅಧ್ಯಕ್ಷ ಮಮ್ಮದ್ ಹುಸೇನ್ ಲಿಂಗರೆ ,  ಕೆಂಪು,  ದುಂಡಪ್ಪ ಹೊಸಕೋಟಿ ಇನ್ನೂ ಹಲವಾರು ಸದಸ್ಯರು ಚಾಲಕರು ಹಾಜರಿದ್ದರು.

Tuesday, September 16, 2025

ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ಪ್ರಸಿದ್ಧ ಪಟಾಕಿ ಜಾತ್ರೆ : ಪಟ್ಟವರ್ಧನ್ ಸರ್ಕಾರ ಕಾಣಿಕೆ ಕೊಟ್ಟ ರಥಕ್ಕೆ ಮದ್ದಿನ ಸುರಿಮಳೆ :



ಬನಹಟ್ಟಿಯ ಪುಣ್ಯದ ತೇರ ಕಾಡಸಿದ್ದನ ಅವತಾರ, ಧನ್ಯ ಧನ್ಯ ಮಾನವ ಜನ್ಮ , ಧನ್ಯ ಧನ್ಯ ಮಾನವ ಜನ್ಮ , ಜಾತ್ರೆ ಬಂತು ಸಡಗರ .  

 ಹೌದು ಬಾಗಲಕೋಟೆ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ಜಾತ್ರೆಯು ಸಪ್ಟಂಬರ್
16 ರಿಂದ ಸತತ ಮೂರು ದಿನಗಳ ಕಾಲ ನಡೆಯಲಿದ್ದು , ಮಂಗಳವಾರ ನಡೆಯುವ ರಥೋತ್ಸವದಲ್ಲಿ ಭಾರಿ ಪ್ರಮಾಣದಲ್ಲಿ ಮದ್ದು ಸುಡುವುದರ ಮುಖಾಂತರ ಕಾಡಸಿದ್ದನಿಗೆ ಭಕ್ತಿ ಅರ್ಪಣೆ ಮಾಡುತ್ತಾರೆ . ಈ ನಗರದ ಜನ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಹಳ್ಳಿಯ ಜನರು ಈ ತೇರಿನ ಮುಂದುಗಡೆ ಭಯ - ಭಕ್ತಿಯಿಂದ ಮದ್ದು ಸುಡುತ್ತಾರೆ . ಈ ಮದ್ದು ಸುಡುವಧನ್ನು ನೋಡಲಿಕ್ಕೆ ಸಾವಿರಾರು ಜನ ಜಂಗುಳಿ . ಇಷ್ಟು ಭಾರಿ ಪ್ರಮಾಣದಲ್ಲಿ ಮದ್ದು ಸುಡುವುದು ಜಿಲ್ಲೆಯಲ್ಲಿಯೇ ಪಟಾಕಿ ಮದ್ದಿನ ಜಾತ್ರೆ ಎಂದು ಪ್ರಸಿದ್ಧ ಹೆಸರುವಾಸಿಯಾಗಿದೆ. ಸುಟ್ಟ ಮದ್ದಿನ ಹೊಗೆ ದಟ್ಟವಾಗಿ ಇಡೀ ನಗರವೇ ಅವರಿಸಿರುತ್ತದೆ. 
 ಜಾತ್ರೆಯ ಮರುದಿನ ಅಂದ್ರೆ ಬುಧವಾರ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಇರುತ್ತದೆ. ಈ ಕುಸ್ತಿ ಪಂದ್ಯಾವಳಿ ನೋಡಲು ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಜನ ಸೇರುತ್ತಾರೆ. ಇದೇ ರಾತ್ರಿ ನಾಟಕ - ಬೈಲಾಟ ಅಲ್ಲದೆ ಖ್ಯಾತ ಕನ್ನಡ ಜಾನಪದ ಪ್ರಸಿದ್ಧ ಖ್ಯಾತ ಹಾಡುಗಾರರ ಮನರಂಜನೆ ಕಾರ್ಯಕ್ರಮ ಕೂಡ ವಿಶೇಷವಾಗಿರುತ್ತದೆ. ಮೂರನೇ ದಿನ ಗುರುವಾರ ಅದ್ದೂರಿಯಾಗಿ ಕಳಸಾರೋಹನ ಕಾರ್ಯಕ್ರಮ ಕೂಡ ಮದ್ದು ಸುಡುವುದು ಮುಖಾಂತರ ನಗರದ ಸೋಮವಾರಪೇಟೆದವರಗೆ ಹೋಗುವದನ್ನು ವಿಶೇಷವಾಗಿರುತ್ತದೆ.

ಈ ರಥಕ್ಕೆ 150 ವರ್ಷಗಳ ಇತಿಹಾಸ ಉಂಟು .

 ಆರಾಧ್ಯ ದೈವ ನಗರದ ಶ್ರೀ ಕಾಡಸಿದ್ದೇಶ್ವರ ಜಾತ್ರೆಯ ದಿನ ನಡೆಯುವ ರಥೋತ್ಸವ ಸುಂದರವಾಗಿ ಕಣ್ಣಿಗೆ ಆಕರ್ಷಣೀಯ . ಈ ರಥೋತ್ಸವಕ್ಕೆ ಮೆರಗು ತರುವುದು ಭವ್ಯವಾದ ( ತೇರು ) ಈ ರಥವನ್ನು ನೆರೆಯ ಜಮಖಂಡಿ ಸಂಸ್ಥಾನದ ಮಹಾರಾಜ ಪಟವರ್ಧನ ಸರ್ಕಾರ ಅವರು ಮಂಗಳವಾರ ಪೇಟೆ ದೈವ ಮಂಡಳಿಗೆ ಕಾಣಿಕೆಯಾಗಿ ನೀಡಿದ್ದರು.
 ಜಾತ್ರೆಯ ಸಂದರ್ಭದಲ್ಲಿ ( ತೇರಿನ ) ಕೊರತೆಯಿದ್ದಾಗ ಪಟ್ಟವರ್ಧನ್ ಸರ್ಕಾರದ ಮಹಾರಾಜರು ರಥವನ್ನು ನೀಡಿ, ಶ್ರೀ ಕಾಡಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ಜರುಗುವ ರಥೋತ್ಸವಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ನಗರದ ದೈವ ಮಂಡಳಿಯ ಹಿರಿಯರಿಂದ ಕರಾರು ಪತ್ರ ಬರೆಯಿಸಿಕೊಂಡ ನಂತರ ತೇರವನ್ನು ( ರಥ ) ನೀಡಿದ್ದರು. ಈ ( ತೇರು ) ರಥವನ್ನು 150 ಕ್ಕಿಂತ ಹೆಚ್ಚು ವರ್ಷಗಳ ಕಾಲ ಹಳೆಯ ಇದ್ದುದ್ದರಿಂದ , ಈಗಷ್ಟೇ ಅದಕ್ಕೆ ಹೊಸ ಮೆರಗನ್ನು ನೀಡಿ ಈಗಲೂ ಅ ಕೇವಲ ರಥೋತ್ಸವಕ್ಕೆ ಮಾತ್ರ ಬಳಸುವುದನ್ನು ನೋಡಬಹುದು. 

 ಈ ರಥ ( ತೇರು ) ಬನಹಟ್ಟಿ ನಗರಕ್ಕೆ ಬಂದು 75 ವರ್ಷ, ಬರುವಕ್ಕಿಂತ ಮುಂಚೆ 80 ವರ್ಷ ಹಳೆಯ ರಥ . ಪಟ್ಟವರ್ಧನ್ ಸರ್ಕಾರದ ರಾಜವಾಡೆಯಲ್ಲಿ ಸೀಸವೆ ಕಟ್ಟಿಗೆಯಿಂದ ನಿರ್ಮಿಸಿದ ತೇರು 150ಕ್ಕಿಂತ ಹೆಚ್ಚು ವರ್ಷಗಳ ಕಾಲ ಹಳೆಯದಾದ ದಾಖಲೆಯ ಇತಿಹಾಸ ಇದೆ .

 ಪ್ರಪ್ರಥಮ ಬಾರಿಗೆ ಮಹಾಪ್ರಸಾದ ಅದ್ದೂರಿ ರೊಟ್ಟಿ ಊಟ : 

 ಶ್ರೀ ಕಾಡಸಿದ್ದೇಶ್ವರ ಜಾತ್ರಾ ಕಮಿಟಿ ಈ ವರ್ಷ ವಿಶೇಷವಾಗಿ ಅದ್ದೂರಿ ರೊಟ್ಟಿ ಊಟದ ಮುಖಾಂತರ ಬರುವಂತ ಸಾವಿರಾರು ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ . ವಿಶೇಷವಾಗಿ ನಗರದ ಎಲ್ಲಾ ಸಮಾಜದ ಬಾಂಧವರಿಗೆ ಮನೆ ಮನೆಯಿಂದ ರೊಟ್ಟಿ ತಯಾರು ಮಾಡಿಕೊಂಡು ಬರುವಂತೆ ಆಹ್ವಾನ ನೀಡಿ ವಿಶೇಷವಾಗಿ ಜಾತ್ರೆಗೆ ಮತ್ತಷ್ಟು ಮೆರಗೂ ನೀಡಲು ಪ್ರಯತ್ನ ಮಾಡಿದ್ದಾರೆ. 


 ಲೇಖನ : ಮಹಿಬೂಬ್ ಎಂ ಬಾರಿಗಡ್ಡಿ
 ಸಂಯುಕ್ತ ಕರ್ನಾಟಕ ದಿನಪತ್ರಿಕೆಯ
  ತೇರದಾಳ್ ತಾಲೂಕ ವರದಿಗಾರರು ಹಾಗೂ ಪತ್ರಿಕೆಯ ಏಜೆಂಟರು, 
Mob : 9448698786
           9448593518

ಬನಹಟ್ಟಿ ನಗರದ ಪಟಾಕಿ ಜಾತ್ರೆಯ ಸರ್ವರಿಗೂ ಹಾರ್ದಿಕ ಶುಭಾಶಯಗಳು

ಸರ್ವರಿಗೂ ಜಾತ್ರೆಯ ಹಾರ್ದಿಕ ಶುಭಾಶಯಗಳು

ನಮ್ಮೂರ ಜಾತ್ರೆ

ಜಾತ್ರೆಯ ಹರುಷ ಪ್ರತಿ ವರುಷ ಮರಳಿ ಮರಳಿ ಬರುವುದು ನಮ್ಮಯ ತನುಮನ ಪುಳಿಕಿತ ಗೊಳಿಸುತ ನವ ಚೈತನ್ಯವ ತುಂಬುವುದು

ಪಟಾಕಿ ಮದ್ದಿನ ಬಿರುಸಿನ ಸದ್ದು ಭಕ್ತರು ಕೇಳಿ ನಲಿಯುವರು ಬಾನಿಗೆ ಹಾರುವ ಬಣ್ಣಿನನ ಬಾಣವ ನೋಡಿ ಎಲ್ಲರೂ ಕುಣಿಯವರು

ಸುತ್ತುವ ಜೇಕಲಿ ಮಕ್ಕಳು ಕುಳಿತು ಕೇಕೇ ಹಾಕಿ ಹಾಡುವರು ಬಾನಲಿ ತೇಲುವ ತೊಟ್ಟಿಲಲ್ಲಿ ಕುಳಿತು ಕೊಂಡು ನಲಿಯುವರು

ಹಲವು ಬಗೆಯ ಆಟಿಕೆ ವಸ್ತು ರಂಗು ರಂಗಿನ ಬಳೆಗಳ ಸಂತೆ ನೋಡಲು ಕೊಳ್ಳಲು ಬರುವರು ಜನರು ಮರೆತು ತಮ್ಮಯ ನಿತ್ಯದ ಚಿಂತೆ

ಕಂಠಮಾಲೆಯು ರಥಕ್ಕೆ ಕಟ್ಟುತ ಹಾಲಾಗಿ ಜೇನಾಗಿ ಎಲ್ಲರೂ ಬೆರೆತು ಪೂಜೆಗೆ ತರುವರು ಕರ್ಪೂರ ಕಾಯಿ ಹಿಂದು ಮುಸ್ಲಿಮ್ ಭೇದವ ಮರೆತು

ರಥದಲ್ಲಿ ಕಾಡ ಸಿದ್ಧನ ಮೂರ್ತಿ ಅದೆಷ್ಟು ಸುಂದರ ಕಾಣುವುದು ಮನದಲ್ಲಿ ಪೂಜ್ಯ ಭಾವನೆ ಬೆಳೆಸಿ ಆತ್ಮಾನಂದವ ನೀಡುವುದು

ರುಚಿಕರ ನಮ್ಮ ಅವಲಕ್ಕಿ ಚೂಡಾ ಬೆಲ್ಲಶ್ ಬರ್ಫಿ ಪೇಡೆ ಕುಂದಾ ಬನಹಟ್ಟಿ ಜಾತ್ರೆಯ ಸೊಬಗನು ಸಾರುತ "" ಈ ಶಮ್ಸ್  ನು ರಚಿಸಿದ ಈ ಕವನಂದಾ

ರಚನೆ: ಶಮಶೋದ್ದಿನ್ ಶಮ್‌ನಿಯಾಜಿ (ಝಾರೆ ಸರ್) ಶಾಂತಿ ನಗರ ಬನಹಟ್ಟಿ-587 311 ಮೊ: 7259863787

Friday, August 1, 2025

ಸಚಿವ ಜಮೀರ ಅಹ್ಮದ ಖಾನ್ ಜನ್ಮ ದಿನಾಚರಣೆ ನಿಮಿತ್ಯ ಆಸ್ಪತ್ರೆ ರೋಗಿಗಳಿಗೆ ಹಾಲು ಹಣ್ಣು ವಿತರಣೆ :

ಸಚಿವ ಜಮೀರ ಅಹ್ಮದ ಖಾನ್ ಜನ್ಮ ದಿನಾಚರಣೆ ನಿಮಿತ್ಯ ಆಸ್ಪತ್ರೆ ರೋಗಿಗಳಿಗೆ ಹಾಲು ಹಣ್ಣು ವಿತರಣೆ : 

ಮುಧೋಳ   :  ಬಡವರಪರ‌ ಕಾಳಜಿ ಹೊಂದಿರುವ ಜನಪ್ರಿಯ ನಾಯಕ‌ ಜಮೀರ್ ಅಹ್ಮದ ಅವರಿಗೆ ದೇವರು ಹೆಚ್ಚಿನ ಆಯಸ್ಸು ಆರೋಗ್ಯ ಕರುಣಿಸಲಿ ಎಂದು ಕೆಪಿಸಿಸಿ‌ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಫಿಕ್ ಬೇಪಾರಿ  ಹಾರೈಸಿದರು.
ವಸತಿ ಸಚಿವ ಜಮೀರ್ ಅಹ್ಮದ್ ಅವರ ಜನ್ಮದಿನದ ಹಿನ್ನೆಲೆ‌ ನಗರದ ಸರ್ಕಾರಿ‌ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು-ಹಣ್ಣು ವಿತರಿಸಿ ಮಾತನಾಡಿದ ಅವರು, ಜಮೀರ್ ಅಹ್ಮದ ಅವರು ಬಡವರ ಪರ ನಿರಂತರ ಕಾಳಜಿ ವಹಿಸಿ ಕೆಲಸ ಮಾಡುತ್ತಾರೆ. ನೂರಾರು ಬಡವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ನೆರವು ನೀಡುವ ಮೂಲಕ ಸರ್ವರನ್ನು ಸಮಾನವಾಗಿ ಕಾಣು ಮನೋಭಾವ ಹೊಂದಿದ್ದಾರೆ. ಅಂತಹ ಮಹಾನ್ ನಾಯಕನಿಗೆ ಜೀವನದಲ್ಲಿ ಮತ್ತಷ್ಟು‌ ಯಶಸ್ಸು ದೊರೆತು ಬಡವರಪರ‌ ಕೆಲಸ‌ ಮಾಡಲು ದೇವರು ಶಕ್ತಿ ನೀಡಬೇಕು ಎಂದು‌ ಶುಭ ಕೋರಿದರು.
 , ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಜಮಾದಾರ, ಸೈಯದ್ ಬಾಬಾವಲಿ, ದಾವಲ  ನದಾಫ, ಶಾಕಿರ್ ಬುಡ್ಡ, ಶೇಕ್  ಮುಜಮಿಲ್ ಬೇಪಾರಿ ಕೂತುಬು ನದಾಫ್, ರಫೀಕ್  ನದಾಫ್, ಫಯಾಜ್ ಮುಲ್ಲಾ 
ನಜಿರ್ ನದಾಫ್ ಸೇರಿದಂತೆ ಇತರರು ಇದ್ದರು.