ಸ್ಟೋರಿ :
ಮೆಹಬೂಬ ಮ ಬಾರಿಗಡ್ಡಿ ಕಲಾಂ ಎಕ್ಸಪ್ರೆಸ್ ನ್ಯೂಸ್ ಸಂಪಾದಕರು
ತೇರದಾಳ, ಜು. ೫: ತೇರದಾಳ ವಿಧಾನಸಭಾ ಕ್ಷೇತ್ರದ ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ಉಪನಗರವಾದ ಶಾಂತಿನಗರ, ಹೊಸೂರು ಗ್ರಾಮದಲ್ಲಿ ಬಾಗಲಕೋಟೆ–ಕುಡಚಿ ರೈಲು ಮರ‍್ಗ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಭೇಟಿ ನೀಡಿ, ರೈಲು ಮರ‍್ಗಕ್ಕೆ ಅಡ್ಡಿಯಾಗಿರುವ ಮನೆಗಳನ್ನು ಶೀಘ್ರದಲ್ಲೇ ಖಾಲಿ ಮಾಡುವಂತೆ ಸ್ಥಳೀಯ ನಿವಾಸಿಗಳಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ವಿಷಯ ತಿಳಿದ ತಕ್ಷಣ ತೇರದಾಳ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಮುಖಂಡ ಅರ್ಜುನ್ ಹಲಗಿಗೌಡರ ಅವರು ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದರು. ಜನರ ಸಮಸ್ಯೆಗಳನ್ನು ಆಲಿಸಿ, ಯಾವುದೇ ಕುಟುಂಬಕ್ಕೂ ಅನ್ಯಾಯವಾಗದಂತೆ ಕಾನೂನುಬದ್ಧವಾಗಿ ಹೋರಾಟ ನಡೆಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರ್ಜುನ್ ಹಲಗಿಗೌಡರ ಅವರು, "ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ಜನರ ಹಿತದೃಷ್ಟಿಯಿಂದ ಅಗತ್ಯವಾಗಿದ್ದರೂ, ಆ ಕಾಮಗಾರಿಗಳ ಹೆಸರಿನಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ಬೀದಿಗೆ ಬೀಳುವಂತಾಗಬಾರದು. ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ನ್ಯಾಯಸಮ್ಮತ ಪರಿಹಾರ, ಪುನರ್ವಸತಿ ಮತ್ತು ಪರ‍್ಯಾಯ ವ್ಯವಸ್ಥೆ ಕಲ್ಪಿಸಬೇಕು. ಜನರೊಂದಿಗೆ ಸಮಾಲೋಚನೆ ನಡೆಸದೇ ಯಾವುದೇ ರೀತಿಯ ಒತ್ತಡ ಹೇರಬಾರದು" ಎಂದು ಆಗ್ರಹಿಸಿದರು.
ಅಲ್ಲದೆ, ಅಧಿಕಾರಿಗಳು ಜನರಲ್ಲಿ ಅನಗತ್ಯ ಭಯ ಮತ್ತು ಗೊಂದಲ ಉಂಟುಮಾಡದೆ, ಸರ್ಕಾರದ ನಿಯಮಾನುಸಾರ ಎಲ್ಲ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು. ಅಗತ್ಯವಿದ್ದಲ್ಲಿ ರೈಲ್ವೆ ಇಲಾಖೆ, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ವಿಷಯವನ್ನು ತಂದು, ಸ್ಥಳೀಯರ ಪರವಾಗಿ ಹೋರಾಟ ನಡೆಸುವುದಾಗಿ ಭರವಸೆ ನೀಡಿದರು.
ಅರ್ಜುನ್ ಹಲಗಿಗೌಡರ ಅವರ ಭೇಟಿ ಹಾಗೂ ಭರವಸೆಯಿಂದ ಸ್ಥಳೀಯ ನಿವಾಸಿಗಳಲ್ಲಿ ಸ್ವಲ್ಪ ಮಟ್ಟಿನ ನೆಮ್ಮದಿ ಮೂಡಿದ್ದು, ತಮ್ಮ ಸಮಸ್ಯೆಗೆ ನ್ಯಾಯ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು. "ನಮ್ಮ ಪರವಾಗಿ ಧ್ವನಿಯಾಗಿರುವುದು ನಮಗೆ ಧೈರ್ಯ ತುಂಬಿದೆ. ನಮ್ಮ ಮನೆ ಹಾಗೂ ಜೀವನೋಪಾಯ ಉಳಿಯುವಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಸ್ಥಳೀಯರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅನೇಕ ಸ್ಥಳೀಯ ಮುಖಂಡರು, ಸಾರ್ವಜನಿಕರು ಹಾಗೂ ಶಾಂತಿನಗರ ನಿವಾಸಿಗಳು ಉಪಸ್ಥಿತರಿದ್ದು, ರೈಲ್ವೆ ಕಾಮಗಾರಿಯಿಂದ ಉಂಟಾಗಬಹುದಾದ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸರ್ಕಾರ ರ ಹಾಗೂ ಸಂಬಂಧಪಟ್ಟ ಇಲಾಖೆಗಳು ಮಾನವೀಯ ದೃಷ್ಟಿಕೋನದಿಂದ ನಡೆದುಕೊಂಡು, ಯಾವುದೇ ಕುಟುಂಬ ನಿರಾಶ್ರಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.
ಅರ್ಜುನ್ ಹಲಗಿಗೌಡರ ಹೇಳಿಕೆ :
"ರೈಲ್ವೆ ಕಾಮಗಾರಿಗೆ ಯಾರೂ ಅಡ್ಡಿಪಡಿಸುವುದಿಲ್ಲ; ಶಾಂತಿನಗರದ ನಿವಾಸಿಗಳಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು"
ಶಾಂತಿನಗರ ಪ್ರದೇಶದಲ್ಲಿ ನಡೆಯಲಿರುವ ರೈಲ್ವೆ ಕಾಮಗಾರಿಗೆ ನಮ್ಮಿಂದ ಯಾವುದೇ ರೀತಿಯ ಅಡ್ಡಿ ಇರುವುದಿಲ್ಲ. ಅಭಿವೃದ್ಧಿ ಕಾಮಗಾರಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವಾಗಿದ್ದು, ಅವುಗಳನ್ನು ನಾವು ಸ್ವಾಗತಿಸುತ್ತೇವೆ. ಆದರೆ ಕಾಮಗಾರಿಯಿಂದ ಮನೆಗಳನ್ನು ಕಳೆದುಕೊಳ್ಳುವ ಶಾಂತಿನಗರದ ನಿವಾಸಿಗಳಿಗೆ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ಮೊದಲು ಸೂಕ್ತ ಪರ್ಯಾಯ ಸ್ಥಳದಲ್ಲಿ ಮನೆಗಳ ವ್ಯವಸ್ಥೆ ಕಲ್ಪಿಸಬೇಕು.
ಜನರನ್ನು ಸ್ಥಳಾಂತರಿಸುವ ಮೊದಲು ಅವರಿಗೆ ಸುರಕ್ಷಿತ ವಸತಿ, ಮೂಲಭೂತ ಸೌಲಭ್ಯಗಳು ಹಾಗೂ ಜೀವನೋಪಾಯಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಕುತ್ಬುದ್ದೀನ್ ಖಾಜಿ, ರಾಜ್ಯ ರೈಲ್ವೆ ಹೋರಾಟಗಾರರ ಸಮಿತಿ ಅಧ್ಯಕ್ಷರ ಹೇಳಿಕೆ :
ರಬಕವಿ-ಬನಹಟ್ಟಿ ಭಾಗದಲ್ಲಿ ರೈಲ್ವೆ ಕಾಮಗಾರಿಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆದಿರುವುದು ಅತ್ಯಂತ ಸಂತೋಷದ ಹಾಗೂ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಈ ಮಹತ್ವದ ಯೋಜನೆಯು ಪ್ರದೇಶದ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಲಿದೆ ಎಂಬ ವಿಶ್ವಾಸವಿದೆ.
ಆದರೆ, ರಬಕವಿ-ಬನಹಟ್ಟಿ ಅವಳಿ ನಗರಗಳ ಉಪನಗರದ ಹೊಸೂರು ಶಾಂತಿ ನಗರದ ಸಾರ್ವಜನಿಕರ ಹಿತದೃಷ್ಟಿಯಿಂದ ರೈಲ್ವೆ ಇಲಾಖೆ ಮತ್ತು ಸಂಬಂಧಿತ ಅಧಿಕಾರಿಗಳು ಅಗತ್ಯ ಮೂಲಸೌಕರ್ಯ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಸ್ಥಳೀಯ ಜನರ ಸಂಚಾರ, ಸುರಕ್ಷತೆ ಮತ್ತು ದೈನಂದಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ.
ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಸಾರ್ವಜನಿಕರ ಅನುಕೂಲಕ್ಕೂ ಸಮಾನ ಆದ್ಯತೆ ನೀಡಿದರೆ ಈ ಯೋಜನೆ ಇನ್ನಷ್ಟು ಜನೋಪಯೋಗಿಯಾಗಲಿದೆ ಎಂದು ರಾಜ್ಯ ರೈಲ್ವೆ ಹೋರಾಟಗಾರರ ಸಮಿತಿ ಅಧ್ಯಕ್ಷ ಕುತ್ತುಬುದ್ದೀನ್ ಖಾಜಿ ತಿಳಿಸಿದರು.